Tuesday, November 4, 2008

ಭಾಷೆ- ತಮಾಷೆ

ಈ ಲೇಖನ ಶುರು ಮಾಡೋಕಿಂತ ಮುಂಚೆ ಒಂದು ಮಾತು, ನಾನು ಎಂದು ಏನು ಬರದಕಿನ ಅಲ್ಲ, ಇದು ನನ್ನ ಮೊದಲನೆ ಪ್ರಯತ್ನ. ಈ MKIU ರಾಜ್ಯೋತ್ಸವ ಸ್ಪರ್ದೆ ನನಗ ಸ್ಪೂರ್ತಿ ಮತ್ತ ಖರೆ ಹೇಳಬೇಕು ಅಂದ್ರ ನನಗ ದೇಶ ಬಿಟ್ಟು ಬಂದ ಮ್ಯಾಲೆ ನಮ್ಮ ಭಾಷಾ ಬಗ್ಗೆ ಪ್ರೀತಿ ಜಾಸ್ತಿ ಆಗೆದ. ಆವಾಗ್ ಈವಾಗ್ ಸುಮ್ಮನ ಒಬ್ಬಾಕೆ ಕುಂತಾಗ್ ನಮ್ಮ ಊರು, ನಮ್ಮ ಜನಾ, ನಮ್ಮ ಭಾಷೆ ನೆನಪಿಗೆ ಬರ್ತದ, ಎಷ್ಟು ಸೊಗಡು ಅದ ನಮ್ಮ ಆಡು ಭಾಷಾದಾಗ, ಅದು ಮಾತಾಡ ಬೇಕಾರ್ ಗೊತ್ತ ಆಗಂಗಿಲ್ಲ ಕುಂತು ವಿಚಾರ ಮಾಡಿದ್ರ ನಗು ಬರ್ತದ , ಹೆಂಗ್ ಮಾತಾಡ್ತವಿ ಅಂಥ ಹೇಳಿ. ಇಲ್ಲಿ ನಾನು ಬರಿಲಿಕ್ಕೆ ಹತ್ತಿರೋದು ಎಲ್ಲ ನನ್ನ ಸುತ್ತ ಮುತ್ತಲಿನ ಜನಾ , ಮತ್ತ ನಡದ ಸಂಗತಿ ಬಗ್ಗೆ.

ನಮ್ಮೂರ ಕಡೆ ಎಂಥ ಚಂದ ಹೆಸರು ಇರ್ಲಿ , ಹೆಸರಿಗೆ ಒಂದು ಅಡ್ಡ ಹೆಸರು ಇಡುದ, ಬಸವ ಬಸ್ಯಾ ಆಗ್ತನ , ಮಂಜುನಾಥ್- ಮಂಜ್ಯ, ಮೃತ್ಯುಂಜಯ- ಮುತ್ಯ , ಪ್ರದೀಪ್-ಪದ್ಯಾ, ಚೇತನ್- ಚೆತ್ಯಾ, ಪವನ್- ಪವ್ಯ ಹಿಂಗ ಹೇಳಿಕೊಂಥ ಹೋದ್ರ ಮಂಗ್ಯಾ ನ ಬಾಲದಂಗ ಪಟ್ಟಿ ಊದ್ದ ಆಕ್ಕತಿ , ನೋಡ್ರಿ ನನಗ ಗೊತ್ತ ಇಲ್ಲದಂಗ ಮಂಗ ಗ ಇನ್ನೊಂದು ಬಾಲ ಹಚ್ಚಿ ಮಂಗ್ಯಾ ನ ಮಾಡಿದೆ. ಇನ್ನ ಮನೆತನದ ಹೆಸರಗಳು ಅಂತು ಮಜಾ ಇರತವ -ಹೊಸಮನಿ, ಹಳೆಮನಿ,ಮುಂದಿನಮನಿ, ಮೇಲಿನಮನಿ, ಹಿಂದಿನ್ಮನಿ, ಮೂಲಿಮನಿ, ಕಡೆಮನಿ,ಸಣ್ಣಮನಿ,ದೊಡ್ಡಮನಿ, ಹಂಚಿನಮನಿ, ಆ ಮನಿ ..... ಈ ಮನಿ.....ಉಳ್ಳಗಡ್ಡಿ , ಬೆಳ್ಳುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ,ಕೊತುಂಬರಿ, ಬದನಿಕಾಯಿ, ಪಲ್ಯೆದ, ಅಕ್ಕಿ, ಸಕ್ರಿ, ಬೆಲ್ಲದ,ಉಪ್ಪಿನ, ಕಡ್ಲಿ, ಹುರಕಡ್ಲಿ, ರೊಟ್ಟಿ, ಅಂಬಲಿ, ನುಚ್ಚಿನ್, ಗಂಜಿ, ಮಜ್ಜಗಿ, ಬಾಳೆಕಾಯಿ, ಬಾಳೆಗಿಡ, ಬೇವಿನಮರ, ಆಲದಮರ, ಹುಣಸಿ ಮರ, ಮಾವಿನಮರ, ಮಾವಿನ್ ತೋಟ ಹಿಂಗ್ ಪಟ್ಟಿ ಮಾಡಿದ್ರ ಯಾವ ಕಾಯಿಪಲ್ಯೆ , ಕಾಳು-ಕಡಿ, ಅಡುಗಿ,ಗಿಡ-ಮರದ ಹೆಸರು ಊಳಿಯದಿಲ್ಲರಿ ಅಷ್ಟ ತರಹಾವರಿ ಇರ್ತಾವ್. ಅಷ್ಟ ಯಾಕ್ರಿ ಕೆಲವರಿಗೆ ಅವ್ರ ಮನಿ ಹೆಸರ ಹೇಳಾಕ್ ನಾಚಿಗಿ ಬರಬೇಕು... ಹ್ಯಾಂಗ್ ಇರ್ತಾವು ಅಂದ್ರ ಒಕ್ಕುಂಡಿ, ಮುಕ್ಕುಂಡಿ (ಎಲ್ಲಾರಿಗೂ ಎರಡು ಇರತಾವ್ ಅಂಥ ಗೊತ್ತಾದ್ ಅದ್ರ ಒಂದು-ಮೂರು ಎಲ್ಲಿ ಮಾತರಿ ...........) ಏನ್ರಿ ಹಿಂಗ್ ಹೊಲಸು ಮತಾಡ್ಲಿಕ್ಕ ಹತ್ತಿರಿ ಅಂಥ ಬೈ ಬ್ಯಾಡ್ರಿ ನೆನಪಿಗೆ ಬಂತು ಹೇಳಿದೆ. ನನ್ನ ಶಾಲ್ಯಗ್ ಒಂದು ಹುಡುಗಿ ಶಿಲ್ಪಾ ಮುಕ್ಕುಂಡಿ ಅಂಥ ಇದ್ಲು , ಅಕಿ ಕಾಲೇಜ್ ಗೆ ಬಂದ ಮ್ಯಾಲೆ ಶಿಲ್ಪಾ .ಎಮ್. ಅಂಥ ಮಾಡ್ಕೊಂಡ್ಲು.

ಹೊಲಸ ಮಾತು ಅಂದ ಕೂಡಲೇ ನನಗ ನಮ್ಮ ತಾತ(ನಮ್ಮಜ್ಜಗ ನಾವು ತಾತ ಅನ್ನೋದು, ಅದಕ್ಕ ಕಾರಣ ನನ್ನ ತಾಯಿ ಬೆಂಗಳೂರ್ ನಾಕಿ ) ನ ನೆನಪು ಆತು ಏನ್ರಿ ಹಿಂಗ್ ಹೇಳಕತ್ತಿರಿ ಅನ್ನ ಬ್ಯಾಡ್ರಿ . ಇದು ನೂರಕ್ಕ ನೂರು ಖರೆ. ನಮ್ಮ ತಾತ ನ ಬಾಯಾಗ್ ಕೆಟ್ಟ ಬೈಗುಳ ಸಾರಸಗಟ್ ಬರತಿದ್ವು. ಯಾರನ್ನರ ಕರಿಬೇಕು ಅಂದ್ರ "ಏ ಬಾರಲೇ ಬದ್ಮಾಶ್ " " ಬೀಡಿ ತಾರಲೇ ಬೋಸಡಿಕೆ" ಹಿಂಗ್ ಮಾತು. ಆದ್ರ ಓಣಿ ಹುಡುಗುರು ಯಾರು ಬ್ಯಾಸರ ಆಗತಿದ್ದಿಲ್ಲ . ಅಪ್ಪಿ ತಪ್ಪಿ ತಾತ ಚಂದಗಿ " ಬಾರಪ್ಪ , ಹೋಗಪ್ಪ " ಅಂದ್ರ ಯಾಕ್ರಿ ಅಜ್ಜರ ನನ್ನ ಮ್ಯಾಲೆ ಸಿಟ್ಟು ಬಂದದ ಏನ್ರಿ ಹಿಂಗ್ ಯಾಕ್ ಕರಿತಿರಿ ಅಂತಿದ್ರು. ನಮ್ಮ ತಾತ ಸತ್ತಾಗ್ ಓಣಿ ಗೆ ಓಣಿ ನ ಕಣ್ಣಿರು ಇಟ್ಟಿತ್ತು. ಒಂದು ಸರ್ತಿ ನಾನು ನಮ್ಮ ತಾತನ ಸಂತಿ ಬೆಂಗಳೂರು ಗೆ ಕೆಂಪು ಡಬ್ಬಿ ಬಸ್ ನಾಗ್ ಹೊಂಟಿದ್ದೆ , ತುಮಕೂರ್ ನಾಗ್ ಹತ್ತು ನಿಮಿಷ ವಿರಾಮ ಇತ್ತು , ತಾತ ಕಾಲು ಸಡಿಲ್ ಮಾಡ್ಕೊಂಡು ಬರ್ತನಿ ಅಂಥ ಹೇಳಿ ಕೆಳಗ ಇಳಿತು. ಅಷ್ಟು ದೂರ ಹೋಗಿ"ಏ ಅನ್ನು , ಒಂದಾಕ ಹೋಗಿ ಬರ್ತಾನಿ ಡ್ರೈವರ್ ಬಂದ್ರ ಗಾಡಿ ನಿಲ್ಲ್ಸ " ಅಂಥ ವದರತ (ಕೂಗು ಅನ್ನೋದಕ್ಕ ನಮ್ಮ ಕಡೆ ವದರುದ್ ಅಂತಾರ್ರಿ ಮತ್ತ ) ಬಸ್ ನಾಗಿನ ಜನಾ ನನ್ನ ನೋಡಕ್ ಹತ್ತಿದ್ರು , ನನಗ ಅಸಹ್ಯ ಅಂದ್ರ ಅಸಹ್ಯ. ಒಂದಾಕ ಅಂದ್ರ "ಪೀ" , ಎರಡಕ್ ಅಂದ್ರ "ಪೂ", ಪೀ ಬಗ್ಗೆ ಹೇಳಿದ್ಮೇಲೆ "ಪೂ" ಬಗ್ಗೆ ಹೇಳದಿದ್ರ ಅನ್ಯಾಯ ಅಕ್ಕತ್ರಿ . ಹಳ್ಳಿ ಕಡೆ "ಪೂ " ಗೆ "ಬಯಲ ಕಡಿ " ,"ಹಿತ್ತಲ್ ಕಡಿಗೆ " , " ಚರಗಿ ತಗೊಂಡು", "ತಮ್ಬಗಿ ತಗೊಂಡು " ಅಂತಾರ್ರಿ , ಯಾಕಂದ್ರ ಹಿಂದಿನ ಕಾಲದಾಗ ಮನಿ ಒಳಗ "ಲೂ" ಇರತಿದ್ದಿಲ್ಲ , ಊರ ಹೊರಗ ಬಯಲಾಗ್ ಒಂದು ಚೊಂಬು ನೀರು ತಗೊಂಡು ಹೋಗಬೇಕಿತ್ತು , ಆವಾಗ ಅನ್ನತಿದ್ರು ತಪ್ಪಿಲ್ಲ ಆದ್ರ ನಮ್ಮ ತಾತ ಕಮೋಡ್ ಮ್ಯಾಲೆ ಕುಂತರು ಬಯಲ ಕಡಿಗೆ ಅನ್ನೋದ್ ಬಿಡಲಿಲ್ಲ , ಫ್ಲಶ್ ಮಾಡಕ್ ಚಾಲೂ ಮಾಡಿದ್ರು ಚರಗಿ ತಗೊಂಡು ಅನ್ನೋದು ತಪ್ಪಲಿಲ್ಲರಿಪಾ.

ಇನ್ನ ಕಡಿಗೆ ಒಂದು ಖರೆ ಸಂಗತಿ ಹೇಳ್ತ್ನಿ ಕೇಳ್ರಿ , ಒಂದು ಸರ್ತಿ ನಾನು ನಮ್ಮ ಅಮ್ಮ ಬಟ್ಟೆ ಅಂಗಡಿಗೆ ಹೋಗಿದ್ವಿ , ಬಹಳ ಗದ್ದಲ ಇತ್ತು ,ಪಾಳಿ ಪ್ರಕಾರ ಬಟ್ಟೆ ತ್ಹೊರಸಲಿಕ್ಕೆ ಹತ್ತಿದ್ರು , ನಮ್ಮ ಮುಂದ ಒಬ್ರು ಗಂಡ-ಹೆಂಡತಿ ಜೋಡಿ ಇತ್ತು , ಆ ಗಂಡ ಮಾವಗ ಶರ್ಟ್ ಬಟ್ಟಿ ತೊಗೊತಿದ್ದ , ಹೆಂಡ್ತಿ ಗೆ ಕೇಳಿದ " ನಿಮ್ಮ ಅಪ್ಪ ಫುಲ್ / ಹಾಫ್ ", ಆಕಿ "ಹಾಫ್" ಅಂದ್ಲು, ಅದಕ್ಕ ಅವ "ನಿಮ್ಮಪ್ಪ ಹಾಫ್, ನಿಮ್ಮಪ್ಪ ಹಾಫ್ " ಅಂತ ಕಿಸಿಯಾಕ್ ಹತ್ತಿದ , ಆವಾಗ ಆ ಗಟ್ಟುಲ್ಲ ಹೆಂಡ್ತಿ ಅಂದ್ಲು "ಹಾಫ್ ಆಗಿದ್ದಕ್ಕ ನಿಮಗ ಕೊಟ್ಟರ್ರಿ" ಅಂಥ, ಆವಾಗ ಆ ಗಂಡನ ಮುಖ ಹಿಂಡಿದ ಹಿಪ್ಪಲಿ ಆದಂಗ್ ಆಗಿತ್ತರಿ. ಇದನ್ನ ಓದಿ ನಿಮ್ಮ ಮುಖದ ಮ್ಯಾಲೆ ಒಂದು ನಗಿ ಕಣ್ತ ಅಂದ್ರ ನಾನು ಇಷ್ಟ ಬರದಿದ್ದು ಸಾರ್ಥಕ್ ಆತು ಅನ್ಕೊಥೆನಿ .